ಹಾಕಿಂಗ್, ಸ್ಟೀಫನ್ 
	1942-. ಇಂಗ್ಲೆಂಡಿನ ಸೈದ್ಧಾಂತಿಕ ಭೌತವಿಜ್ಞಾನಿ. ಖಭೌತ ಹಾಗೂ ಶಕಲ-ವಿಜ್ಞಾನಗಳಲ್ಲಿ ಕ್ರಾಂತಿಕಾರಕ ಸಿದ್ಧಾಂತಗಳ ಮಂಡನಕಾರ. ವಿರಳಾತಿವಿರಳ ಮಾರಕ ರೋಗಪೀಡಿತನಾಗಿ ಅಂಗೋಪಾಂಗಗಳ ಮೇಲಿನ ಹತೋಟಿಯನ್ನು ಕಳೆದುಕೊಂಡಿದ್ದರೂ ಮೂಲಭೂತ ಚಿಂತನೆಗಳಲ್ಲಿ ಸದಾ ಮಗ್ನನಾಗಿರುವ ಜೀವಂತ ಪವಾಡ, ವೈದ್ಯಕೀಯ ಸೋಜಿಗ. ಬಾಲ್ಯದಲ್ಲಿ ಎಲ್ಲ ಯುವಕರಂತೆ ಸುಟಿಯಾಗಿದ್ದ ಈತ ಆಕ್ಸ್‍ಫರ್ಡ್ ಮತ್ತು ಕೇಂಬ್ರಿಜ್‍ನ ಕೀಸ್ ಕಾಲೇಜಿನಲ್ಲಿ ಸಂಶೋಧನ ವಿದ್ಯಾರ್ಥಿಯಾಗಿ ಆಯ್ಕೆಗೊಂಡ. ಗಣಿತ ಮತ್ತು ಭೌತವಿಜ್ಞಾನಗಳಲ್ಲಿ ಪದವಿ ಗಳಿಸಿದ. ಇವನು ಸಂಶೋಧನೆ ಮತ್ತು ಅಧ್ಯಯನಕ್ಕೆ ಆಯ್ದುಕೊಂಡದ್ದು ಸೈದ್ಧಾಂತಿಕ ಭೌತವಿಜ್ಞಾನ ಮತ್ತು ವಿಶ್ವವಿಜ್ಞಾನ (ಕಾಸ್ಮಾಲಜಿ). ಆಗಲೇ ಜ್ವಲಂತ ವಿಷಯಗಳಾಗಿದ್ದ ಕೃಷ್ಣವಿವರ (ಬ್ಲ್ಯಾಕ್ ಹೋಲ್) ಹಾಗೂ ಪ್ರಪಂಚದ ಹುಟ್ಟು ಮತ್ತು ಸಾವು ಕುರಿತು ವಿಶೇಷ ಆಸಕ್ತಿ ತಳೆದ.

	ಕೇವಲ 21ರ ಹರೆಯದಲ್ಲಿ ಇವನು ಮೋಟರ್ ನ್ಯೂರಾನ್ ಅಥವಾ ಅಮೈಟ್ರಾಫಿಕ್ ಲ್ಯಾಟರಲ್ ಸ್ಕ್ಲಿರೋಸಿಸ್ (ಎಎಲ್‍ಎಸ್) ಎಂಬ ವ್ಯಾದಿಪೀಡಿತನಾಗಿದ್ದುದು ತಿಳಿಯಿತು. ಇದೊಂದು ನರಸಂಬಂಧೀ ಬೇನೆ-ನರ ಮತ್ತು ಮಾಂಸಖಂಡಗಳ ಸ್ವಯಂಚಲನಶಕ್ತಿಯನ್ನು ಕ್ರಮೇಣ ಸ್ಥಗಿತಗೊಳಿಸುತ್ತದೆ. ಅವನಲ್ಲಿ ಈ ರೋಗವನ್ನು ಪತ್ತೆ ಹಚ್ಚಿದ ತಜ್ಞವೈದ್ಯ ಕೇವಲ ಎರಡುವರ್ಷ ಆಯುಷ್ಯವೆಂದು ಮುನ್ನುಡಿದಿದ್ದ (1963). ಇಂದಿಗೂ (2004) ಬದುಕಿಕೊಂಡಿದ್ದಾನೆ, ಮಿದುಳು ಕ್ರಿಯಾಶೀಲವಾಗಿದೆ!

	ಇವನಿಗೆ ಪ್ರತಿಷ್ಠಿತ ರಾಯಲ್ ಸೊಸೈಟಿ ಸದಸ್ಯತ್ವ (ಎಫ್‍ಆರ್‍ಎಸ್) ಪ್ರದಾನವಾಗಿದೆ (1974). ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಗುರುತ್ವ ಭೌತವಿಜ್ಞಾನ ಪ್ರಾಧ್ಯಾಪಕನಾಗಿ 1977ರಲ್ಲಿ ನೇಮಕಗೊಂಡ. ಹಿಂದೆ ಐಸಾಕ್ ನ್ಯೂಟನ್ (1642-1727) ಅಲಂಕರಿಸಿದ್ದ ಲುಕೇಶಿಯನ್ ಪ್ರಾಧ್ಯಾಪಕ ಪೀಠಾಧ್ಯಕ್ಷ ಪದವಿ ಇವನಿಗೆ ಲಭಿಸಿತು (1979).

	ಜೇನ್ ವೈಲ್ಡೆ ಜೊತೆ ವಿವಾಹ (1965); ಮೂವರು ಆರೋಗ್ಯವಂತ ಮಕ್ಕಳಿದ್ದಾರೆ; ಆದ್ದರಿಂದ ಎಎಲ್‍ಎಸ್ ವ್ಯಾಧಿ ಆನುವಂಶಿಕವಲ್ಲ ಎಂದು ಸಾಬೀತಾಗಿದೆ. ಈತ ತನ್ನ ಗಾಲಿಕುರ್ಚಿಯಲ್ಲಿ ಕುಳಿತುಕೊಂಡೇ ಪ್ರಪಂಚಪರ್ಯಟನೆ ಮಾಡಿದ್ದಾನೆ. ಕೆಲವು ವರ್ಷಗಳ ಹಿಂದೆಯಷ್ಟೇ ಇವನಿಗೆ ಗಂಟಲಿನ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಅಲ್ಲಿಯ ತನಕ ಇವನಿಗಿದ್ದ ಗೊಗ್ಗರು ಧ್ವನಿಯೂ ಆಗ ಉಡುಗಿಹೋಯಿತು. ಇವನೀಗ ತನ್ನ ಕುರ್ಚಿಗೆ ಅಳವಡಿಸಿರುವ ಗಣಕಧ್ವನಿಗ್ರಹಣಯಂತ್ರದ ಮೂಲಕವೇ ಮಾತಾಡುತ್ತಾನೆ. ಭೌತಿಕವಾಗಿ ಪೂರ್ತಿ ಪರಾವಲಂಬಿಯಾಗಿದ್ದರೂ ಬೌದ್ಧಿಕವಾಗಿ ಚುರುಕಾಗಿದ್ದಾನೆ. ವಿಶ್ವವಿಜ್ಞಾನ ಕುರಿತಂತೆ ಹಲವಾರು ಸಂಶೋಧನ ಪ್ರಬಂಧಗಳನ್ನೂ ಪರಾಮರ್ಶನ ಗ್ರಂಥಗಳನ್ನೂ ರಚಿಸಿದ್ದಾನೆ. ಇವನ ಅತ್ಯಂತ ಜನಪ್ರಿಯ ಮತ್ತು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟ ವಾಗಿರುವ ಒಂದು ಕೃತಿ ಕಾಲದ ಸಂಕ್ಷೇಪ ಇತಿಹಾಸ (ಎ ಬ್ರೀಫ್ ಹಿಸ್ಟರಿ ಆಫ್ ಟೈಮ್). ದಿ ಲಾರ್ಜ್ ಸ್ಕೇಲ್ ಸ್ಟ್ರಕ್ಚರ್ ಆಫ್ ಸ್ಪೇಸ್‍ಟೈಮ್, ಸಾಸರ್ ಸ್ಟಾರ್ ಅ್ಯಂಡ್ ಸೂಪರ್ ಗ್ರ್ಯಾವಿಟಿ, ಬ್ಲ್ಯಾಕ್ ಹೋಲ್ಸ್ ಅ್ಯಂಡ್ ಬೇಬಿ ಯೂನಿವರ್ಸಸ್ ಇವು ಇವನ ಗಮನಾರ್ಹ ಕೃತಿಗಳು.

	ಇವನ ವಿಶೇಷ ಅಧ್ಯಯನಕ್ಷೇತ್ರ ಕೃಷ್ಣವಿವರ ಮತ್ತು ವಿಶ್ವಕುರಿತು ಇದೆ. ಕೃಷ್ಣವಿವರ (ಕಪ್ಪುಕುಳಿ) ಪೂರ್ತಿ ಕಪ್ಪಲ್ಲ, ಅದರಿಂದ ಹಲವಾರು ಕಣಗಳು ತಪ್ಪಿಸಿಕೊಂಡು ಹೊರಸಿಡಿಯುತ್ತವೆ ಎಂಬ ವಿನೂತನ ವಾದವನ್ನು ತರಂಗಚಲನಸಿದ್ಧಾಂತ ಆಧರಿಸಿ ಮಂಡಿಸಿದ (1974). ಇದು ನಿಜವಾದರೆ ಒಂದಲ್ಲ ಒಂದು ದಿವಸ ಕೃಷ್ಣವಿವರದ ಅಸ್ತಿತ್ವವೇ ಅಳಿಸಿಹೋಗಬೇಕು! ಖಭೌತವಿಜ್ಞಾನ ರಂಗದಲ್ಲಿ ಈ ವಿಚಿತ್ರ ವಾದ ಕ್ಷೋಭೆಗೆ ಕಾರಣವಾಯಿತು-ಇವನ ಮುಂಚೂಣಿ ವಿಜ್ಞಾನಿಗಳು ಯಾರೂ ಇವನ ವಾದವನ್ನು ಸಮರ್ಥಿಸಲಿಲ್ಲ. ಭಾರತೀಯ ವಿಜ್ಞಾನಿಗಳೂ ಆಗ  ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದರು. ತೀರ ಈಚೆಗೆ ಇವನು ತನ್ನ ವಾದ ಅಸಮರ್ಪಕವೆಂಬ ಅಂಶವನ್ನು ಪ್ರಕಟಿಸಿದ್ದಾನೆ, ಅದಕ್ಕೆ ತಿದ್ದುಪಡಿ ಸೂಚಿಸಿದ್ದಾನೆ (ಜುಲೈ 2004).

	ಏಕೀಕೃತಕ್ಷೇತ್ರ ಸಿದ್ಧಾಂತದಲ್ಲಿಯೂ (ಗುರುತ್ವಕ್ಷೇತ್ರಕ್ಕೆ ಶಕಲ ಸಿದ್ಧಾಂತವನ್ನು ಸಂಯೋಜಿಸುವ ಚಿಂತನೆ) ಇವನು ವೈಜ್ಞಾನಿಕ ಊಹೆಗಳನ್ನು ಮುಂದಿಟ್ಟಿದ್ದಾನೆ.	
							
	(ಬಿ.ಎಸ್.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ